ಬಾಂಗ್ಲಾದೇಶದ ನಂತರ ಬಲೂಚಿಸ್ತಾನ !

೧. ವಿಭಜನೆಯ ಸಮಯದಲ್ಲಿ ಬಲೂಚಿಸ್ತಾನಕ್ಕೆ ಪಾಕಿಸ್ತಾನವನ್ನು ಸೇರಲು ಇಷ್ಟವಿರಲಿಲ್ಲ !
ಭಾರತದ ಇದು ವರೆಗಿನ ಇತಿಹಾಸದಲ್ಲಿ ಮುಖ್ಯವಾಗಿ ವಿಭಜನೆಯೇ ಎಲ್ಲಕ್ಕಿಂತ ದೊಡ್ಡ ತಪ್ಪಾಗಿದೆ. ಅಂದರೆ ಭಾರತದ ಇತಿಹಾಸವನ್ನು ವಸ್ತುನಿಷ್ಠ ವಾಗಿ ಗಮನಿಸಿದರೆ ಇನ್ನೂ ಅನೇಕ ಘಟನೆಗಳಲ್ಲಿ ಅತ್ಯಂತ ದೊಡ್ಡ ತಪ್ಪುಗಳಾಗಿವೆ ಎಂಬುದನ್ನು ನಿರ್ಧರಿಸಬಹುದು. ಆದರೆ ಇತಿಹಾಸದಲ್ಲಿನ ಘಟನೆಗಳ ಅರ್ಥ, ಅನ್ವಯಾರ್ಥ ಮತ್ತು ಮಹತ್ವಗಳು ವರ್ತಮಾನಕಾಲದ ಸಂದರ್ಭದಿಂದ ನಿರ್ಧರಿಸಲಾಗುತ್ತವೆ. ಆದುದರಿಂದ ವಿಭಜನೆಯು ಇದು ವರೆಗಿನ ಇತಿಹಾಸದಲ್ಲಿ ಅತ್ಯಂತ ದೊಡ್ಡ ತಪ್ಪಾಗಿದೆ. ಬ್ರಿಟೀಷ್ ಸಾಮ್ರಾಜ್ಯದ ಒಡೆದಾಳುವ ನೀತಿ, ಮತಾಂಧ ಮುಸಲ್ಮಾನ್ ಪ್ರತ್ಯೇಕತಾವಾದಿಗಳು, ಅದನ್ನು ಬ್ರಿಟೀಶರು ಪೋಷಿಸುವುದು, ಅಂದಿನ ಕಾಂಗ್ರೆಸ್‌ನಿಂದ ಆ ಕುರಿತು ಅನುಸರಿಸುವ ಪರಾಜಯದ ನಿಲುವು ಮುಂತಾದವು ವಿಭಜನೆಗೆ ಕಾರಣವಾಗಿವೆ. ಡಾ. ರಾಮಮನೋಹರ ಲೋಹಿಯಾ ಇವರ ಅಭಿಪ್ರಾಯದಂತೆ ಅಂದಿನ ಕಾಂಗ್ರೆಸ್ ಮುಖಂಡರ ಅಧಿಕಾರ ಲಾಲಸೆಯಿಂದಾಗಿ ಭೀಕರ ರಕ್ತರಂಜಿತ ಅಧ್ಯಾಯವು ರೂಪುಗೊಂಡಿತು. ಆ ವಿಭಜನೆಯ ಸಮಯದಲ್ಲಿಯೂ ಬಲೂಚಿಸ್ತಾನಕ್ಕೆ ಪಾಕಿಸ್ತಾನದಲ್ಲಿ ಸೇರ್ಪಡೆಯಾಗಲು ಇಷ್ಟವಿರಲಿಲ್ಲ. ಅವರಿಗೆ ಒಂದೋ ಸ್ವತಂತ್ರವಾಗುವ ಇಲ್ಲ ಭಾರತದಲ್ಲಿ ಸೇರುವ ಇಚ್ಛೆ ಇತ್ತು.
೨. ಮುಸಲ್ಮಾನರಿಗೆ ಜನಗಣನೆಯಲ್ಲಿ ತಮ್ಮ ಭಾಷೆ ಉರ್ದು ಎಂದು ನಮೂದಿಸಲು ಹೇಳುವ ಕುಹಕ ನಡೆ !
ಬಲೂಚಿಸ್ತಾನದ ತುಲನೆಯಲ್ಲಿ ಬಾಂಗ್ಲಾದೇಶ ಅಂದರೆ ಆ ಸಮಯದ ಪೂರ್ವಪಾಕಿಸ್ತಾನ ತಾನಾಗಿ ಪ್ರತಿಭಟನೆ, ರಕ್ತಪಾತ, ಗಲಭೆಗಳನ್ನು ಮಾಡಿ ಪಾಕಿಸ್ತಾನದಲ್ಲಿ ಸೇರ್ಪಡೆಯಾಗಿತ್ತು; ಆದರೆ ಪಶ್ಚಿಮ ಪಾಕಿಸ್ತಾನದ ರಾಜಕಾರಣಿಗಳು ಪೂರ್ವಪಾಕಿಸ್ತಾನದೊಂದಿಗೆ ಭೇದಭಾವದಿಂದ ವರ್ತಿಸಿ, ಶೋಷಣೆ ಮಾಡುತ್ತ ಒಂದು ಬಡಾವಣೆಯಂತೆ ವರ್ತಿಸಿದರು. ಪೂರ್ವ ಪಾಕಿಸ್ತಾನೀಯರದ್ದು (ಅಂದರೆ ಪೂರ್ವ ಬಂಗಾಲದಲ್ಲಿ) ಮುಸಲ್ಮಾನ ಧರ್ಮವಾಗಿದ್ದರೂ ಅವರಿಗೆ ಬಂಗಾಲಿ ಭಾಷೆಯ ಬಗ್ಗೆ ಅಪಾರ ಅಭಿಮಾನವಿತ್ತು. ಆದರೆ ಪಾಕಿಸ್ತಾನದ ರಾಜಕಾರಣಿಗಳು ಉರ್ದು ಮುಸಲ್ಮಾನರ ಭಾಷೆಯಾಗಿರುವುದರಿಂದ ಇದೇ ಪಾಕಿಸ್ತಾನದ ರಾಷ್ಟ್ರ ಭಾಷೆಯಾಗಿದೆ, ಎಂದು ಘೋಷಿಸಿ ಪೂರ್ವಪಾಕಿಸ್ತಾನದ ಮೇಲೆ  ಅದನ್ನು ಹೇರುವ ಧೋರಣೆಯನ್ನು ಸ್ವೀಕರಿಸಿದರು. ವಾಸ್ತವದಲ್ಲಿ ಉರ್ದು ಭಾಷೆ ಆಗಲೂ ಮತ್ತು ಇಂದಿಗೂ ಪಾಕಿಸ್ತಾನದಲ್ಲಿ ಯಾವುದೇ ಜನಸಮೂಹದ ಮುಖ್ಯ ಭಾಷೆಯಾಗಿಲ್ಲ; ಆದರೆ ಯಾವ ರೀತಿ ಮುಸಲ್ಮಾನರ ಮತಾಂಧತೆಯಿಂದ ವಿಭಜನೆಯ ಬೇಡಿಕೆಯು ಮುಂದೆ ಬಂದಿತೋ, ಆ ಮತಾಂಧತೆಯಿಂದಲೇ ಉರ್ದು ಇದು ಮುಸಲ್ಮಾನರ ಭಾಷೆ, ಎಂಬ ವಿಚಾರವಾಯಿತು. ಇಂದಿಗೂ ಭಾರತೀಯ ಮುಸಲ್ಮಾನರಿಗೆ  ಇದೇ ರೀತಿಯ ಪಾಠ ಹೇಳಿಕೊಡುವ ಡಾ. ಝಾಕೀರ ನಾಯಿಕ್‌ರಂತಹ ಶಕ್ತಿಗಳು ಭಾರತದಲ್ಲಿ ಕಾರ್ಯ ಮಾಡುತ್ತಿವೆ. ಭಾರತದ ವಿವಿಧ ಪ್ರದೇಶಗಳಲ್ಲಿನ  ಮುಸಲ್ಮಾನರು ಆಯಾ ಪ್ರದೇಶದ ಭಾಷೆ ಕಲಿಯುವುದು ಅಥವಾ ಮಾತನಾಡುವುದನ್ನು ಮಾಡಬಾರದು, ಜನಗಣನೆಯಲ್ಲಿ ತಮ್ಮ ಭಾಷೆ ಉರ್ದು ಎಂದು ನಮೂದಿಸಬೇಕು. ತಮ್ಮ ಭಾಷೆ  ಮರಾಠಿ, ಕನ್ನಡ ಮುಂತಾಗಿ ಹೇಳುವಂತಿಲ್ಲ, ಎಂಬುದಾಗಿ ಅವರಿಗೆ ಕಲಿಸುತ್ತಾರೆ. ಇದರಲ್ಲಿ ಕೆಲವು ಮುಸಲ್ಮಾನರು ಅಪವಾದಾತ್ಮಕವಾಗಿದ್ದಾರೆ.
೩. ಬಾಂಗ್ಲಾದೇಶಿ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದ್ದ ಉರ್ದು ಭಾಷೆ ಕಡ್ಡಾಯ ಮಾಡುವುದು !
ಸ್ವಾತಂತ್ರ್ಯದ ನಂತರ ಭಾರತದ ರಾಜಕಾರಣಿಗಳು ವಿವಿಧತೆಯನ್ನು ಸ್ವೀಕರಿಸುತ್ತಾ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಲಿಲ್ಲ. ಉರ್ದು ಭಾಷೆಯನ್ನು ಕಡ್ಡಾಯಗೊಳಿಸುವ ಪಾಕಿಸ್ತಾನದ ನಿಲುವಿನ ಬಗ್ಗೆ ಪೂರ್ವ ಪಾಕಿಸ್ತಾನದಲ್ಲಿ ತೀವ್ರ ಪ್ರತಿಕ್ರಿಯೆಗಳು ಮೂಡಿಬಂದವು. ಅಲ್ಲದೇ ಪ್ರತಿನಿಧಿತ್ವವು ಇಲ್ಲದಿರುವುದು, ಪಶ್ಚಿಮ ಪಾಕಿಸ್ತಾನದಿಂದಾಗುವ ಆರ್ಥಿಕ ಶೋಷಣೆ ಮುಂತಾದ ಒಟ್ಟು ಪ್ರತಿಕ್ರಿಯೆಗಳಿಂದ ಕೊನೆಗೆ ೨೫ ಮಾರ್ಚ್ ೧೯೭೧ ರಂದು ಸ್ವತಂತ್ರ ಬಾಂಗ್ಲಾದೇಶದ ಘೋಷಣೆ ಮಾಡಲಾಯಿತು.
೪. ಪಾಕ್ ಸೇನೆಯ ಹಿಂದೂದ್ವೇಷಿ ಆದೇಶ !
ಪಾಕ್ ವಿಭಜನೆಯಾಗಲು ಭಾರತವೇ ಹೊಣೆಯಾಗಿದೆ ಎಂದು ಬಾಂಗ್ಲಾದೇಶವು ಸ್ವತಂತ್ರವಾದಾಗಿನಿಂದ ಪಾಕಿಸ್ತಾನವು ಹೇಳುತ್ತ ಭಾರತವನ್ನೂ ತುಂಡುತುಂಡು ಮಾಡಲು ನಿಶ್ಚಯಿಸಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ೧೯೭೧ ರಲ್ಲಿಯೂ ಬಾಂಗ್ಲಾದೇಶಲ್ಲಿರುವ ಹಿಂದೂ ಪುರುಷರ ಕೊಲೆ ಮಾಡಿ ಮತ್ತು ಸ್ತ್ರೀಯರ ಮೇಲೆ ಬಲಾತ್ಕಾರ ಮಾಡಿ, ಎಂದು ಪಾಕಿಸ್ತಾನ ಸೈನ್ಯಕ್ಕೆ ಸ್ಪಷ್ಟವಾಗಿ ಲಿಖಿತ ಆದೇಶವಿತ್ತು. ಅಮೇರಿಕದ ಪತ್ರಕರ್ತ ಮೇರಿ ಬಾಸ್ ಇವರು ತಮ್ಮ ಬ್ಲಡ್ ಟೆಲಿಗ್ರಾಮ್ ಎಂಬ ಗ್ರಂಥದಲ್ಲಿ ಇದನ್ನು ಪುರಾವೆ ಸಹಿತ ಬರೆದಿದ್ದಾರೆ. ನಾವು ಭಾರತೀಯರೆಲ್ಲರೂ ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
೪ ಅ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ನರಸಂಹಾರದತ್ತ  ಉದ್ದೇಶಪೂರ್ವಕವಾಗಿ ದುರ್ಲಕ್ಷಿಸುವ ಅಮೇರಿಕಾ ! :  ವಿಶ್ವ ಸಂಸ್ಥೆಯ ನಿಯಮಗಳಿಗನುಸಾರ ಹಾಗೂ ಅಂತರರಾಷ್ಟ್ರೀಯ ಕಾನೂನಿಗನುಸಾರ ಯಾವುದೇ ಸಮೂಹವನ್ನು ಭಾಷೆ, ವಂಶ ಮತ್ತು ಧರ್ಮ ಈ ಕಾರಣ ಗಳಿಂದಾಗಿ ಅದನ್ನು ಕೊಲೆ ಮಾಡುವುದೆಂದರೆ, ನರಸಂಹಾರ ! ೧೯೭೧ ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರವಾಯಿತು. ಇದರ ಬಗ್ಗೆ ಅಮೇರಿಕಾಗೂ ತಿಳಿದಿತ್ತು; ಆದರೆ ಆ ಸಮಯದಲ್ಲಿ ಶೀತಲಸಮರ, ಚೀನಾದೊಂದಿಗಿನ ಸುಧಾರಣೆಯ ಹೆಜ್ಜೆ, ಅದಕ್ಕಾಗಿ ಪಾಕಿಸ್ತಾನದ ಸಹಾಯ ಮತ್ತು ಭಾರತದ್ವೇಷಗಳಿಂದಾಗಿ ನಿಕ್ಸನ್-ಕಿಸಿಂಜರ ಜೋಡಿಯು ಬಾಂಗ್ಲಾದೇಶದಲ್ಲಿನ ಸಂಹಾರದತ್ತ ಉದ್ದೇಶಪೂರ್ವಕವಾಗಿ ದುರ್ಲಕ್ಷಿಸಿತು.
೪ ಆ. ಬಾಂಗ್ಲಾದೇಶದಲ್ಲಿ ಆಗುತ್ತಿರುವ ಹಿಂದೂಗಳ ನರಸಂಹಾರದ ಬಗ್ಗೆ ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತದಿರುವುದು ! : ಈ ಅವಧಿಯಲ್ಲಿ ಬಾಂಗ್ಲಾದೇಶದಿಂದ ೧ ಕೋಟಿ ನಿರಾಶ್ರಿತರು ಭಾರತಕ್ಕೆ ಬಂದರು. ಅದರಲ್ಲಿ ೯೫ ಲಕ್ಷಕ್ಕಿಂತ ಅಧಿಕ ಜನರು ಹಿಂದೂಗಳಾಗಿದ್ದರು. ಭಾರತವು ಪ್ರಥಮ ಮುಕ್ತಿವಾಹಿನಿಯ ಮೂಲಕ ಮತ್ತು ಪಾಕಿಸ್ತಾನವು ಯುದ್ಧ ಘೋಷಿಸಿದ ನಂತರ ನೇರ ಯುದ್ಧ ಮಾಡಿಯೇ ಬಾಂಗ್ಲಾದೇಶ ವನ್ನು ಮುಕ್ತಗೊಳಿಸಿತು. ಪಾಕಿಸ್ತಾನವು ಬೇಷರತ್ ಶರಣಾಯಿತು. ನಾವು ಪಾಕ್‌ನ ೯೩ ಸಾವಿರ ಯುದ್ಧ ಕೈದಿಗಳನ್ನು ಸರಿಯಾಗಿ ಕಾಪಾಡಿದೆವು ಮತ್ತು ಜುಲೈ ೧೯೭೨ ರ ಶಿಮ್ಲಾ ಕರಾರಿನ ನಂತರ ಮುಕ್ತಗೊಳಿಸಿದೆವು ! ಆದರೆ ಭಾರತವು ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಹಾರ ಮತ್ತು ಬಲಾತ್ಕಾರಗಳ ವಿಷಯಗಳನ್ನು ಪಾಕಿಸ್ತಾನದ ಬಳಿ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತಲಿಲ್ಲ. ಈಗ ೪೫ ವರ್ಷಗಳ ನಂತರ ಅವಾಮಿ ಲೀಗ್‌ನ ನಾಯಕಿ ಹಸಿನಾ ವಾಜೀದ್‌ರವರು ಅದನ್ನು ಅವಲೋಕಿಸಿ ನ್ಯಾಯಪ್ರಕ್ರಿಯೆಯ ನಂತರ ಬಾಂಗ್ಲಾದೇಶ ಮುಲ್ಲಾ-ಮೌಲ್ವಿಗಳನ್ನು ಗಲ್ಲಿಗೇರಿಸುತ್ತಿದ್ದಾರೆ. ಆದರೆ ಇದಕ್ಕೆ ಜವಾಬ್ದಾರವಾಗಿರುವ ಪಾಕಿಸ್ತಾನದ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಎಲ್ಲಿಯೂ ಚರ್ಚೆಯಾಗುವುದಿಲ್ಲ. ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ನರಸಂಹಾರದ ಕಾನೂನುಪ್ರಕಾರ ಕ್ರಮಕೈಗೊಳ್ಳುವ ಬಗ್ಗೆ ಮುಂದಿನ  ಹೆಜ್ಜೆ ಇಡಬೇಕು.
೫. ಪಾಕ್‌ನಲ್ಲಿರುವ ಹಿಂದೂಗಳಿಗೆ  ರಕ್ಷಕರು ಯಾರೂ ಇಲ್ಲ !
ಬಾಂಗ್ಲಾದೇಶ ಮಾತ್ರವಲ್ಲ; ವಿಭಜನೆಯ ನಂತರ ಕಳೆದ ೬೯ ವರ್ಷ ಗಳಲ್ಲಿ ಪಾಕಿಸ್ತಾನದಲ್ಲಿಯೂ ಹಿಂದೂಗಳ ಹತ್ಯೆ, ಹಿಂದೂ ಸ್ತ್ರೀಯರ ಮೇಲಿನ  ಬಲಾತ್ಕಾರ ಮತ್ತು ಬಲವಂತದ ಮತಾಂತರ ಈ ಕೃತ್ಯಗಳನ್ನು ಮಾಡಲಾಗಿವೆ. ಇತ್ತೀಚೆಗೆ ಇಮ್ರಾನ್ ಖಾನ್ ಸಹ ಅದಕ್ಕೆ ಸ್ವೀಕೃತಿ ನೀಡಿದ್ದಾರೆ. ಸ್ವಾತಂತ್ರ್ಯಾ ನಂತರ ಮಾಡಿದ ನೆಹರೂ-ಲಿಯಾಕತ ಕರಾರಿನಲ್ಲಿ ಎರಡೂ ದೇಶಗಳು ಅಲ್ಪಸಂಖ್ಯಾತರ ರಕ್ಷಣೆ ಮತ್ತು ಸಂವರ್ಧನೆ ಮಾಡಲು ನಿರ್ಧರಿಸಿ ದ್ದವು. ಭಾರತವು ತನ್ನ ಹೊಣೆಯನ್ನು ಅಚ್ಚುಕಟ್ಟಾಗಿ ಪಾಲಿಸಿತು; ಆದರೆ ಪಾಕಿಸ್ತಾನದಲ್ಲಿ ಕಳೆದ ೬೯ ವರ್ಷಗಳಲ್ಲಿ ಹಿಂದೂಗಳು ಹೆಚ್ಚುಕಡಿಮೆ ನಶಿಸಿಯೇ ಹೋಗಿದ್ದಾರೆ. ಪೇಶಾವರದ ಒಂದು ಶಾಲೆಯಲ್ಲಿ ಒಂದು ಕ್ರೈಸ್ತ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಮೇಲೆ ಇಸ್ಲಾಂದ್ರೋಹದ (blasphemy) ಬಗ್ಗೆ  ಕೇವಲ ಆರೋಪ ಮಾಡಲಾಗಿತ್ತು, ಆದರೂ ಅವಳ ಮಾನವಾಧಿಕಾರಗಳ ರಕ್ಷಣೆಗಾಗಿ ಜಗತ್ತಿನಾದ್ಯಂತ ಎಷ್ಟು ಧ್ವನಿ ಎದ್ದಿತೆಂದರೆ, ಆಗ ಅಧಿಕಾರದಲ್ಲಿದ್ದ ಸೇನೆಯ ಮುಖ್ಯಸ್ಥ ಪರವೇಝ ಮುಶ್ರಫ್ ಇವರು ಈ ಪ್ರಕರಣದಲ್ಲಿ ಗಮನ ಹರಿಸಿ ಕ್ಷಮೆಯಾಚನೆ ಮಾಡಬೇಕಾಯಿತು ಮತ್ತು  ಆ ಕ್ರೈಸ್ತ ಶಿಕ್ಷಕಿಯ ರಕ್ಷಣೆಯ ವಚನ ನೀಡಬೇಕಾಯಿತು. ಆದರೆ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂಗಳ ಪಕ್ಷದಲ್ಲಿ ಜಗತ್ತಿನಾದ್ಯಂತ ಯಾರೂ ಧ್ವನಿ ಎತ್ತುವುದಿಲ್ಲ. ಭಾರತ ಸರಕಾರದ ವಿಚಾರದ ಪ್ರಕಾರ ಅದು ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿದೆ. ನಮ್ಮ ಸ್ವಾತಂತ್ರ್ಯೋತ್ತರ ಜಾತ್ಯಾತೀತೆಗನುಸಾರ ಹಿಂದೂಗಳಿಗೆ ಮಾನವಾಧಿಕಾರಗಳು ಇರುವುದೇ ಇಲ್ಲ. ಅದಕ್ಕಾಗಿ ಹೋರಾಡುವುದು ಕೋಮುವಾದವಾಗಿರುತ್ತದೆ !
೬. ಭಾರತವನ್ನು ಅನೇಕ ಬಾರಿ ಕೆಣಕುತ್ತಿದ್ದರೂ ಪಾಕ್ ವಿಷಯದಲ್ಲಿ ಭಾರತದ ನಿಲುವು ಸೌಮ್ಯ !
ಬಾಂಗ್ಲಾದೇಶ ಮುಕ್ತಿ ಸಮರದಲ್ಲಿ ಪರಾಭವಗೊಂಡ ನಂತರ ಪಾಕಿಸ್ತಾನಕ್ಕೆ ಪಾರಂಪರಿಕ ಯುದ್ಧದಲ್ಲಿ ನಮಗೆ ಭಾರತವನ್ನು ಯಾವತ್ತೂ ಪರಾಭವ ಗೊಳಿಸಲು ಸಾಧ್ಯವಿಲ್ಲ, ಎಂಬುದು ತಿಳಿಯಿತು. ಅಂದಿನಿಂದ ಪಾಕಿಸ್ತಾನವು ಯುಕ್ತಿ ಮಾಡಿ ಭಾರತದ ವಿರುದ್ಧ  ಅಣ್ವಸ್ತ್ರ ಮತ್ತು ಉಗ್ರವಾದ, ಈ ಎರಡು ಧೋರಣೆಗಳನ್ನು ಅವಲಂಬಿಸಿತು. ಭಾರತದ ಮೇಲೆ ಸಾವಿರಾರು ಆಕ್ರಮಣ ಮಾಡಿ ಅದಕ್ಕೆ ರಕ್ತರಂಜಿತಗೊಳಿಸುವ ಧೋರಣೆ ಎಂದರೆ ಉಗ್ರವಾದ ! ಕಾಶ್ಮೀರದಲ್ಲಿ ಮತ್ತು ಭಾರತಾದ್ಯಂತ ಈ ಧೋರಣೆಯನ್ನು ಕಾರ್ಯಾನ್ವಿತಗೊಳಿಸಲಾಯಿತು. ಕಾರ್ಗಿಲ್‌ನಲ್ಲಿ ನುಸುಳುವಿಕೆ (೧೯೯೯), ಸಂಸತ್ತಿನ ಮೇಲಿನ ದಾಳಿ (೨೦೦೧), ಮುಂಬಯಿ ಮೇಲಿನ ದಾಳಿ (೨೦೦೮) ಇವು ಉದಾಹರಣೆಗಳಾಗಿವೆ. ಭಾರತವು ಸಿಟ್ಟಿಗೆದ್ದು ಪಾಕ್‌ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬಗ್ಗೆ  ಹೇಳಿದರೆ, ಪಾಕಿಸ್ತಾನವು ಪ್ರತಿಸಲ ಅಣ್ವಸ್ತ್ರ ಉಪಯೋಗಿಸುವ ಬಗ್ಗೆ ಬೆದರಿಸುತ್ತದೆ.
೭. ಬಲೂಚಿಸ್ತಾನವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯಿಂದ ಪಾಕಿಸ್ತಾನ, ಚೀನಾ ಸಹಿತ ಜಗತ್ತಿಗೆಲ್ಲ ಎಚ್ಚರಿಕೆ !
ಭಾರತದ ಸೌಮ್ಯ ಮತ್ತು ಸಹನಶೀಲ ವರ್ತನೆಯಿಂದಾಗಿ ಪಾಕಿಸ್ತಾನದ ಈ ಇಬ್ಬಗೆಯ ಧೋರಣೆಗಳಿಗೆ ಒಂದು ಅಭೇದ್ಯಕವಚವು ನಿರ್ಮಾಣ ವಾಗಿತ್ತು. ಈ ಅಭೇದ್ಯಕವಚದಿಂದ ನಿರ್ಮಾಣವಾದ ಅಹಂಕಾರದಿಂದ ಗುರುದಾಸಪೂರ, ಉಧಮಪೂರ, ಪಠಾಣಕೋಟ ಮುಂತಾದೆಡೆ ಪಾಕ್ ಬೆಂಬಲಿತ ಉಗ್ರರು ನಿರಂತರ ದಾಳಿ ನಡೆಸುತ್ತಿದ್ದರು. ಇವುಗಳಲ್ಲಿ ಗುರುದಾಸಪೂರದ ಉಗ್ರ ದಾಳಿಯ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ ಡೋವಾಲ ಅವರು ಪಾಕ್ ಬೆಂಬಲಿತ ಇನ್ನು ಒಂದು ದಾಳಿಯಾದರೂ, ನಾವು ಬಲೂಚಿಸ್ತಾನದ ವಿಷಯವನ್ನು ಎತ್ತಿ ಹಿಡಿಯುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಆದರೆ ಪಾಕಿಸ್ತಾನ ಇನ್ನಷ್ಟು ಉಗ್ರರ ಆಕ್ರಮಣಗಳನ್ನು ನಡೆಸುವ ಷಡ್ಯಂತ್ರವನ್ನು ರಚಿಸಿತು. ಈಗ ಸ್ವಾತಂತ್ರ್ಯದಿನದಂದು ದೇಶವನ್ನು ಸಂಬೋಧಿಸುವಾಗ ಪ್ರಧಾನಿ  ನರೇಂದ್ರ ಮೋದಿಯವರು ನೇರ ಬಲೂಚಿಸ್ತಾನವನ್ನು ಉಲ್ಲೇಖಿಸಿ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಇಡೀ ಜಗತ್ತಿಗೇ ಎಚ್ಚರಿಕೆ ನೀಡಿದ್ದಾರೆ.
೮. ಪಾಕಿಸ್ತಾನವು ಸೇನೆಯನ್ನು ಕಳುಹಿಸಿ ಆಕ್ರಮಕ ರೀತಿಯಲ್ಲಿ ಬಲೂಚಿಸ್ತಾನವನ್ನು ವಶಪಡಿಸಿಕೊಳ್ಳುವುದು !
ಪ್ರಾರಂಭದಲ್ಲಿ ಹೇಳಿದಂತೆ ವಿಭಜನೆಯ ಸಮಯದಲ್ಲಿ ಬಲೂಚಿ ಸ್ತಾನಕ್ಕೆ ಪಾಕಿಸ್ತಾನಕ್ಕೆ ಸೇರಲು ಇಷ್ಟವಿರಲಿಲ್ಲ. ೧೯ ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಕಲಾಟ, ಲಾಸಬೇಲಾ, ಖಾರಾನ ಮತ್ತು ಮಕರಾನ ಎಂಬ ೪ ಸಂಸ್ಥಾನಗಳಿದ್ದವು. ಇದರಲ್ಲಿ ಮುಖ್ಯವಾಗಿ ಕಲಾಟ ಈ ಪ್ರದೇಶವಿತ್ತು. ಮುಂದಿನವು ಇದರ ಅಧಿಪತ್ಯದೊಳಗಿದ್ದವು. ೧೮೩೮ ರಲ್ಲಿ ಬ್ರಿಟೀಶರೊಂದಿಗೆ  (ಈಸ್ಟ್ ಇಂಡಿಯಾ ಕಂಪನಿಯೊಡನೆ) ಕರಾರು ಮಾಡಿ ಕಲಾಟವು ಬ್ರಿಟೀಶರ ಅಧಿಕಾರದಲ್ಲಿರಲು ಒಪ್ಪಿಕೊಂಡಿತು. ಭಾರತವನ್ನು ಬಿಟ್ಟು ಹೋಗುವಾಗ  ಬ್ರಿಟೀಶರು  ಮಾಡಿದ ಕಾನೂನಿಗನುಸಾರ ಕಲಾಟ್ ಸ್ವತಂತ್ರವಾಗಿದ್ದು ಬಲೂಚಿಸ್ತಾನದ ಘೋಷಣೆ ಮಾಡಿತ್ತು. ಅದಕ್ಕೆ  ೫ ಆಗಸ್ಟ್ ೧೯೪೭ ರಂದು ಮಹಮ್ಮದ ಅಲಿ ಜಿನಾ ಮನ್ನಣೆಯನ್ನೂ ನೀಡಿದ್ದರು; ಆದರೆ ನಂತರ ಜೀನಾ ಅವರು ಬಲೂಚಿಸ್ತಾನವನ್ನು ಪಾಕಿಸ್ತಾನದಲ್ಲಿ ಸೇರಿಸಲು ಆಗ್ರಹ ಪಡಿಸುತ್ತಿದ್ದರು. ಬಲೂಚಿಸ್ತಾನವು ಒಪ್ಪುತ್ತಿಲ್ಲ ಎಂಬುದು ತಿಳಿದಾಗ ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ಸೇನೆಯನ್ನು ನುಗ್ಗಿಸಿತು. ಪಾಕಿಸ್ತಾನವು ಅಕ್ಟೋಬರ್ ೧೯೪೭ ರಲ್ಲಿ ಕಾಶ್ಮೀರದಲ್ಲಿಯೂ ಹೀಗೆಯೆ ಮಾಡಿತ್ತು.
೯. ಬಲೂಚಿಸ್ತಾನವನ್ನು ಪಾಕ್‌ನಲ್ಲಿ ಬಲವಂತವಾಗಿ ಸೇರ್ಪಡೆಗೊಳಿಸುವುದು !
೨೭ ಮಾರ್ಚ್ ೧೯೪೮ ರಂದು ಪಾಕಿಸ್ತಾನ ಸೇನೆಯು ಬಲೂಚಿಸ್ತಾನ ವನ್ನು ವಶಪಡಿಸಿಕೊಂಡ ನಂತರ ಪಾಕ್‌ನಲ್ಲಿ ಸೇರಿಸಿಕೊಳ್ಳುವ ಕರಾರಿನ ಮೇಲೆ ಕಲಾಟನ ಅಂದಿನ ಸಂಸ್ಥಾನಿಕರಾದ ಮೀರ ಅಹಮದ ಯಾರ ಖಾನ್‌ರು ಬಲವಂತದಿಂದ ಹಸ್ತಾಕ್ಷರ  ಮಾಡಿದರು ಮತ್ತು ನಂತರ ಅದನ್ನು ನಿರಾಕರಿಸಿದರು. ಅಂದಿನಿಂದ ಬಲೂಚಿಸ್ತಾನದಲ್ಲಿ ಪಾಕಿಸ್ತಾನದಿಂದ ಸ್ವತಂತ್ರವಾಗಲು ಸತತವಾಗಿ ಬಂಡಾಯ  ನಡೆಯುತ್ತಿದೆ. ಆರಂಭದಲ್ಲಿ ಬಲೂಚಿಸ್ತಾನವು ಭಾರತದಲ್ಲಿ ಸೇರ್ಪಡೆಯಾಗಲು ಮನವಿ ಮಾಡಿತ್ತು. ಆದರೆ ಅದನ್ನು ನೆಹರೂ ನಿರಾಕರಿಸಿದರು ! ಬಲೂಚಿಸ್ತಾನದಲ್ಲಿ ೧೯೪೮, ೧೯೫೮-೫೯, ೧೯೬೨-೬೩, ೧೯೭೩-೭೭ ರಲ್ಲಿ  ಮತ್ತು ೨೦೦೬ ರಿಂದ ಇದುವರೆಗೆ ಪಾಕಿಸ್ತಾನದ ವಿರುದ್ಧ ಬಂಡಾಯ ನಡೆಯುತ್ತಿದೆ. ಅದರ ನೇತೃತ್ವ ಸರದಾರ ಅಕಬರ ಖಾನ ಬುಗ್ತಿ ಬಳಿ ಇತ್ತು. ಅವರು, ನಾನು ಕಳೆದ ೧೩೦೦ ವರ್ಷಗಳಿಂದ ಮುಸಲ್ಮಾನನಾಗಿದ್ದೇನೆ; ಆದರೆ ಕಳೆದ ೫,೦೦೦ ವರ್ಷಗಳಿಂದ ಬಲೂಚಿಯಾಗಿದ್ದೇನೆ, ಎಂದು ಹೇಳುತ್ತಿದ್ದರು.
೧೦. ೮ ನೇ ಶತಮಾನದಲ್ಲಿ ಇಸ್ಲಾಮ್ ಸ್ವೀಕರಿಸುವ ಮುನ್ನ ಬಲೂಚಿಗಳು ಹಿಂದೂ-ಬೌದ್ಧರಾಗಿದ್ದರು !
೮ ನೇ ಶತಮಾನದಲ್ಲಿ ಇಸ್ಲಾಂ ಸ್ವೀಕರಿಸುವ ಮೊದಲು ಬಲೂಚಿ ಜನರು ಹಿಂದೂ-ಬೌದ್ಧರಾಗಿದ್ದರು. ಬಲೂಚಿ ಭಾಷೆಯು ಸಂಸ್ಕೃತ ಭಾಷೆಗೆ ಸಂಬಂಧಪಟ್ಟ, ರೂಢಿಯಿಂದ ಇಂಡೊ-ಆರ್ಯನ್ ಭಾಷೆಯ ಗುಂಪಿಗೆ ಸೇರಿದೆ. ಅಲ್ಲದೇ ಬುರರ್ಯಿ ಹೆಸರಿನ ದಕ್ಷಿಣಾತ್ಯ ಮತ್ತು ರೂಢಿಯಲ್ಲಿ ದ್ರವಿಡರೆಂದು ಕರೆಯಲ್ಪಡುವ ಭಾಷಾ ಸಮೂಹದ ಭಾಷೆಯನ್ನು ಇಂದಿಗೂ ಬಲೂಚಿಯಲ್ಲಿ ಮಾತನಾಡುತ್ತಾರೆ. ಭಾರತೀಯ ಸಂಸ್ಕೃತಿಯ ಎಲ್ಲಕ್ಕಿಂತ ಪ್ರಾಚೀನ ಪುರಾತತ್ತ್ವದ ಅವಶೇಷಗಳು ಬಲೂಚಿಸ್ತಾನದ ಮೆಹರಗಢದಲ್ಲಿ ಕಂಡುಬಂದಿವೆ. ಅವರ ಕಾಲವು ಕ್ರಿ.ಪೂ. ೭೦೦೦ ಕ್ಕಿಂತ ಮೊದಲಿನದ್ದಾಗಿತ್ತು. ಈಗಿನ ಪಾಕಿಸ್ತಾನದ ಸುಮಾರು ಶೇ. ೪೪ ರಷ್ಟು ಭೂಭಾಗವು ಬಲೂಚಿಸ್ತಾನಕ್ಕೆ ಸಂಬಂಧಪಟ್ಟಿದೆ; ಆದರೆ ಜನಸಂಖ್ಯೆಯು ಪಾಕ್‌ನ ಒಟ್ಟು ಜನಸಂಖ್ಯೆಯ  ಶೇ. ೪ ಕ್ಕಿಂತ ಕಡಿಮೆ ಇದೆ.
೧೧. ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದ್ದರೂ ಬಲೂಚಿಸ್ತಾನ ಬಡಪಾಯಿ !
ಬಲೂಚಿಸ್ತಾನವು ಪೆಟ್ರೋಲ್, ನೈಸರ್ಗಿಕ ಅನಿಲ, ತಾಮ್ರ ಮತ್ತು ಚಿನ್ನದ ಗಣಿಗಳಿಂದ ಸಮೃದ್ಧವಾದ ದೇಶವಾಗಿದೆ. ಆದರೆ ಈ ನೈಸರ್ಗಿಕ ಸಂಪತ್ತಿನಿಂದ ಬಲೂಚಿಸ್ತಾನಕ್ಕೆ ಯಾವುದೇ ಲಾಭವಾಗಲಿಲ್ಲ. ಆ ದೇಶವು ಬಡತನದಲ್ಲಿಯೇ ಉಳಿಯಿತು. ಅಲ್ಲದೇ ನಮ್ಮ ಮೇಲೆ ಪಂಜಾಬಿಗಳ ಆಡಳಿತವಿದೆ. ನಾವು ಅವರ ವಸಾಹತುದಾರರಾಗಿದ್ದೇವೆ ಮತ್ತು ನಮ್ಮ ಮೇಲೆ ಅನ್ಯಾಯವಾಗುತ್ತಿದೆ, ಎಂದು ಬಲೂಚಿಸ್ತಾನದ ಜನರ ಭಾವನೆಯಿದೆ.
೧೨. ಭಾರತಕ್ಕೆ ಭೌಗೋಲಿಕ, ರಾಜಕೀಯ ಮತ್ತು ಧೋರಣಾತ್ಮಕದೃಷ್ಟಿಯಲ್ಲಿ ಬಲೂಚಿಸ್ತಾನವು ಮಹತ್ವದ್ದಾಗಿರುವುದು !
ಪಾಕಿಸ್ತಾನ ಮತ್ತು ಚೀನಾ ನಡುವಿನ ಆತ್ಮೀಯತೆ ಹೆಚ್ಚುತ್ತಿದೆ. ಅದಕ್ಕನು ಸರಿಸಿ ಚೀನಾವು ‘ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್’ (ಸಿಪಿಈಸಿ) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಅಕ್ಸಾಯಿ ಚೀನ್ ಪ್ರದೇಶವನ್ನು ಚೀನಾ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಆ ಪ್ರದೇಶದಲ್ಲಿ ಟಿಬೇಟ್ ಮತ್ತು ಸಿಂಕಿಯಾಂಗನ್ನು ಜೋಡಿಸುವ ರಸ್ತೆ, ವಿಮಾನ ನಿಲ್ದಾಣ ಮುಂತಾದವುಗಳನ್ನು ಚೀನಾ ನಿರ್ಮಿಸಿದೆ. ಈ ಕಾರಿಡಾರ್ ಅಕ್ಸಾಯಿ ಚೀನ್ ಮೂಲಕ ಸಂಪೂರ್ಣ ಪಾಕಿಸ್ತಾನವನ್ನು ದಾಟಿ ಬಲೂಚಿಸ್ತಾನದ ಗ್ವಾದಾರ ಬಂದರಿನ ವರೆಗೆ ತಲುಪುತ್ತದೆ. ಪಾಕಿಸ್ತಾನವು ಗ್ವಾದಾರ ಬಂದರನ್ನು ವಿಕಸಿತಗೊಳಿಸುವ ಕಾರ್ಯವನ್ನು ಚೀನಾಗೆ ಒಪ್ಪಿಸಿದೆ. ಇದೆಲ್ಲವೂ ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಹಾನಿಕರವಾಗಿದೆ. ಅದಕ್ಕಾಗಿ ಭಾರತವೂ ಇರಾನ್‌ನೊಂದಿಗೆ ಸ್ನೇಹ ಬೆಳೆಸಿ ಗ್ವಾದಾರ ಬಂದರ್‌ನ ಸಮೀಪದಲ್ಲಿರುವ ಚಾಹಬಾರ ಬಂದರಿನ ವಿಕಾಸ ಮಾಡಲು ಗುತ್ತಿಗೆ ಪಡೆದಿದೆ. ಅಲ್ಲಿಂದ ಅಫ್ಘಾನಿಸ್ತಾನ ಮಾರ್ಗವಾಗಿ ಮಧ್ಯ ಏಷ್ಯಾಗೆ ಹೋಗುವ ಅಂದರೆ ಪಾಕಿಸ್ತಾನವನ್ನು ಸಂಪೂರ್ಣವಾಗಿ ಬದಿಗೊತ್ತಿ ಒಂದು ರಾಷ್ಟ್ರೀಯ ಹೆದ್ದಾರಿಯನ್ನು ಭಾರತವೇ ಸಿದ್ಧಗೊಳಿಸುತ್ತಿದೆ. ಒಟ್ಟಿನಲ್ಲಿ ಬಲೂಚಿಸ್ತಾನದ ಭೂ-ರಾಜಕೀಯ ಮತ್ತು ಧೋರಣಾತ್ಮಕ ಮಹತ್ವವು ಭಾರತ ಮತ್ತು ಪಾಕಿಸ್ತಾನಗಳಿಗೆ ಮಾತ್ರ ಸೀಮಿತವಾಗಿರದೇ, ಸುತ್ತಮುತ್ತಲಿನ ಇರಾನ್, ಅಫ್ಘಾನ್, ಚೀನಾ ಮತ್ತು ಸಂಪೂರ್ಣ ವಿಶ್ವಾದ್ಯಂತ ವ್ಯೆಹ ರಚನೆಯಲ್ಲಿ ಮಹತ್ವದ ಸ್ಥಾನವಿದೆ.
೧೩. ಪಾಕ್ ಮತ್ತು ಚೀನಾಗಳ ಭಾರತವಿರೋಧಿ ಚಟುವಟಿಕೆಗಳನ್ನು ತಡೆಯುವುದು ಆವಶ್ಯಕ !
ಜಾಗತಿಕ ಮಟ್ಟದಲ್ಲಿ ಉಗ್ರವಾದಿಗಳ ಕೇಂದ್ರವಾಗಿದ್ದ ಪಾಕಿಸ್ತಾನ ದಿಂದ ಭಾರತ ಮಾತ್ರವಲ್ಲದೇ ಇಡೀ ಜಗತ್ತಿಗೇ ಅಪಾಯವಿದೆ. ಇಂತಹ ಉಗ್ರವಾದಿ ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿದ್ದು ಅದನ್ನು ಅದು ಅಂತಾರಾಷ್ಟ್ರೀಯ ಕಳ್ಳಮಾರ್ಗದಿಂದ ಪಡೆದಿದೆ, ಹಾಗೆಯೇ ಉತ್ತರ ಕೊರಿಯಾ, ಇರಾನ್ ಮತ್ತು ಲಿಬಿಯಾ ಇವುಗಳಿಗೆ ಕಳ್ಳಮಾರ್ಗದಿಂದ ಪೂರೈಸಿದೆ ಮತ್ತು ಇದು ಸಿದ್ಧವಾಗಿದೆ. ಪಾಕಿಸ್ತಾನದ ಬೇಜವಾಬ್ದಾರಿತನ ಮತ್ತು  ಆಕ್ರಮಕತೆಯು ಇಡೀ ವಿಶ್ವಕ್ಕೇ ಅಪಾಯಕಾರಿಯಾಗಿದೆ; ಆದರೆ ಅದರಿಂದ ಎಲ್ಲಕ್ಕಿಂತ  ಹೆಚ್ಚು ಮತ್ತು ಎಲ್ಲಕ್ಕಿಂತ ಮೊದಲು ಅಪಾಯಕಾರಿ ಯಾಗಿರುವುದು ಭಾರತಕ್ಕೆ. ಅಲ್ಲದೇ ಪಾಕಿಸ್ತಾನವನ್ನು ಮುಂದೆ ಮಾಡಿ ಚೀನಾ ಮಾಡುತ್ತಿರುವ ಭಾರತವಿರೋಧಿ ಚಟುವಟಿಕೆಗಳಿಗೂ ಕಡಿವಾಣ ಬೀಳಬೇಕಾಗಿದೆ. ಪಾಕಿಸ್ತಾನಕ್ಕೆ ತಿಳಿಯುವ ಭಾಷೆಯಲ್ಲಿ ಉತ್ತರ ಕೊಡುವ ಸಮಯವು ಯಾವತ್ತೋ ಬಂದು ಹೋಗಿದೆ.
- ಶ್ರೀ. ಅವಿನಾಶ ಧರ್ಮಾಧಿಕಾರಿ, ಮಾಜಿ ಐಎಎಸ್ ಅಧಿಕಾರಿ (ಆಧಾರ : ಸಾಪ್ತಾಹಿಕ ವಿವೇಕ, ೨೦.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದ ನಂತರ ಬಲೂಚಿಸ್ತಾನ !